ಕಶ್ಯಪ : ಸಪ್ತರ್ಷಿಗಳಲ್ಲಿ ಒಬ್ಬ. ಮರೀಚಿ ಮಹರ್ಷಿಯ ಮಗ. ಅತ್ಯಂತ ಪ್ರಾಚೀನನೆಂದು ಶ್ರುತಿಗಳು ಹೇಳುತ್ತವೆ. ವೇದಮಂತ್ರ ದ್ರಷ್ಟಾರನಾದ ಈತನ ವ್ಯಕ್ತಿತ್ವ ಬಹುಮಖಶಕ್ತಿಯ ಪ್ರತೀಕವಾಗಿ ತೋರುತ್ತದೆ. ಈತನಿಗೆ ದಿತಿ ಅದಿತಿ ಮೊದಲಾದ ಹದಿಮೂರು ಮಂದಿ ಹೆಂಡತಿಯರು. ಅದಿತಿಯ ಮಕ್ಕಳೇ ಆದಿತ್ಯರು. ದಿತಿಯ ಮಕ್ಕಳು ದೈತ್ಯರು. ಉಳಿದ ಪತ್ನಿಯರಲ್ಲಿ ನಾಗರು, ಉರಗರು ಮೊದಲಾದವರ ಉತ್ಪತ್ತಿಯಾಯಿತು. ದಿವಸ್ವಂತನಿಗೂ ಗರುಡನಿಗೂ ಕಶ್ಯಪನೇ ತಂದೆ. ಈತ ಒಬ್ಬ ಪ್ರಜಾಪತಿಯೂ ಆಗಿದ್ದ. ವಾಮನಾವತಾರದಲ್ಲಿ ವಿಷ್ಣುವಿಗೆ ಈತ ಪಿತ, ಪರಶುರಾಮನಿಗೂ ದಾಶರಥಿ ರಾಮನಿಗೂ ಪುರೋಹಿತ.   (ಸಿ.ಜಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ